ಪ್ಯಾನ್ 2.0 ಘೋಷಣೆ?ಏನಿದು?

ಏನಿದು? ಜನಕ್ಕೆ ಏನೆಲ್ಲ ಉಪಯೋಗ?




ಪ್ಯಾನ್ ಕಾರ್ಡ್‌ಗಳ ಸುಧಾರಣೆ, ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆ ಸೇರಿ ವಿವಿಧ ಬದಲಾವಣೆ ತರುವ ದಿಸೆಯಲ್ಲಿ ಕೇಂದ್ರ ಸರಕಾರವು ಪ್ಯಾನ್ 2.0 ಯೋಜನೆ ಘೋಷಣೆ ಮಾಡಿದೆ. ಇದರಲ್ಲಿ ತೆರಿಗೆ ಸುಧಾರಣೆ, ತೆರಿಗೆದಾರರ ನೋಂದಣಿ ಪ್ರಕ್ರಿಯೆ ಸರಳೀಕರಣಗೊಳಿಸುವುದು ಸೇರಿ ಹಲವು ಉದ್ದೇಶಗಳಿವೆ. ಹಾಗಾದರೆ, ಏನಿದು ಪ್ಯಾನ್ 2.0 ?

ಇದರಿಂದ ಏನೆಲ್ಲ ಉಪಯೋಗ? ಯಾವ ತಂತ್ರಜ್ಞಾನ ಇರಲಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.


ಏನಿದು ಪ್ಯಾನ್ 2.0


ಬದಲಾದ ಕಾಲಘಟ್ಟದಲ್ಲಿ ಸಾರ್ವಜನಿಕರು, ತೆರಿಗೆ ಪಾವತಿದಾರರು, ಉದ್ಯಮಿಗಳು ಸೇರಿ ಪ್ರತಿಯೊಬ್ಬರಿಗೂ ಪ್ಯಾನ್‌ ಕಾರ್ಡ್ ಅತ್ಯವಶ್ಯವಾಗಿದೆ. ಹಾಗಾಗಿ, ಕೇಂದ್ರ ಸರಕಾರವು ಪ್ಯಾನ್ ಕಾರ್ಡ್ ಸುಧಾರಣೆಗಾಗಿ ಪ್ಯಾನ್ 2.0 ಯೋಜನೆ ಜಾರಿಗೆ ತಂದಿದೆ. ಪ್ಯಾನ್ ಕಾರ್ಡ್ ಸುಲಭ ನೋಂದಣಿ, ಉದ್ಯಮ ಸರಳೀಕರಣ, ತೆರಿಗೆದಾರರ ನೋಂದಣಿ ಪ್ರಕ್ರಿಯೆ ಸರಳಗೊಳಿಸಲು, ಜನರ ಸುರಕ್ಷತೆ ಕಾಪಾಡುವುದು ಹಾಗೂ ಆಧುನಿಕ ತಂತ್ರಜ್ಞಾನದ ಅಳವಡಿಕೆ ದೃಷ್ಟಿಯಿಂದ ಹೊಸ ಯೋಜನೆ ಘೋಷಿಸಿದೆ.


ಇ-ಪ್ಯಾನ್ ಕೂಡ ಪಡೆಯಬಹುದು

ಪ್ಯಾನ್ 2.0 ಯೋಜನೆಯಲ್ಲಿ ಜನ ಇನ್‌ಸ್ಟಂಟ್ ಇ-ಪ್ಯಾನ್ ಕೂಡ ಪಡೆಯಬಹುದು. ಹಣಕಾಸು ವಹಿವಾಟು ನಡೆಸುವಾಗ ಭೌತಿಕ ಪ್ಯಾನ್‌ಗೆ ಬದಲಾಗಿ ಇ-ಪ್ಯಾನ್ ನೆರವಿಗೆ ಬರಲಿದೆ. ಮೊದಲ ಬಾರಿಗೆ ಪ್ಯಾನ್ ಮಾಡಿಸುವವರಿಗೂ ಇದು ಅನುಕೂಲ ವಾಗಲಿದೆ. ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ, ಇನ್‌ಸ್ಟಂಟ್ ಇ-ಪ್ಯಾನ್‌ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದು ಉಚಿತ ಸೇವೆಯಾಗಿದೆ.

ಈಗಿರುವ ಪ್ಯಾನ್ ನಿಷ್ಕ್ರಿಯ ?

ಕೇಂದ್ರ ಸರಕಾರವು ಪ್ಯಾನ್ 2.0 ಯೋಜನೆ ಘೋಷಣೆ ಮಾಡಿದ ಬೆನ್ನಲ್ಲೇ ಈಗಿರುವ ಪ್ಯಾನ್‌ ಕಾರ್ಡ್‌ಗಳು ನಿಷ್ಕ್ರಿಯವಾಗುತ್ತವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ನೀಡಿದ ಮಾಹಿತಿ ಪ್ರಕಾರ, ಈಗಿರುವ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗುವುದಿಲ್ಲ. ಸುರಕ್ಷತೆ, ಸರಳ ಪ್ರಕ್ರಿಯೆಗಾಗಿ ಪ್ಯಾನ್ ಅಪ್‌ಡೇಟ್ ಮಾಡಿಕೊಳ್ಳಿ ಎಂದು ಸಚಿವರು ಮನವಿ ಮಾಡಿದ್ದಾರೆ.


ತಿಳಿಯಲೇಬೇಕಾದ ಅಂಶಗಳು

• ಹೊಸ ಪ್ಯಾನ್‌ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಇರುತ್ತದೆ, ಸುರಕ್ಷತೆ ದೃಷ್ಟಿಯಿಂದ ಇದು ಪ್ರಮುಖ


# ಪ್ಯಾನ್ 2.0 ಯೋಜನೆಯು ಪ್ಯಾನ್ ಹಾಗೂ ಟ್ಯಾನ್ (ಟ್ಯಾಕ್ಸ್‌ ಡಿಡಕ್ಷನ್ ಆ್ಯಂಡ್ ಕಲೆಕ್ಷನ್ ಅಕೌಂಟ್ ನಂಬರ್)ಗೆ ಒಂದೇ ವೇದಿಕೆ.


# ಆದಾಯ ತೆರಿಗೆ ಇಲಾಖೆ ಪೋರ್ಟಲ್‌ಗೆ ಭೇಟಿ ನೀಡಿ, ಪ್ಯಾನ್ ಅಪ್‌ಡೇಟ್ ಮಾಡಿ ಕೊಳ್ಳಬೇಕು. ಇದಕ್ಕೆ ಶುಲ್ಕವಿಲ್ಲ.


# ಉದ್ಯಮ ಸರಳೀಕರಣ, ತೆರಿಗೆ ದಾರರಿಗೆ ಸುಲಭ ನೋಂದಣಿ, ಡಿಜಿಟಲೀಕರಣಕ್ಕೆ ಒತ್ತು ನೀಡುವುದು ಪ್ರಮುಖ ಗುರಿ.